Saturday, February 23, 2008

ನಗರ


ನಾನು ಬೆಳೆದದ್ದು ಮೈಸೂರಿನಲ್ಲಿ. ಶಾಲೆ ಮುಗಿದು ಬೇಸಿಗೆ ಬಂತೆಂದರೆ ನಾನು ನನ್ನ ತಮ್ಮ ನಮ್ಮ ಸೋದರತ್ತೆಯರ ಮನೆಗಳಿಗೆ ಹೋಗಲು ತವಕಿಸುತ್ತಿದ್ದೆವು. ಹಿರಿಯ ಅತ್ತೆ ಇದ್ದದ್ದು ಚಾಮರಾಜನಗರದಲ್ಲಿ. ಕಿರಿಯವಳು ಬೆಂಗಳೂರಿನಲ್ಲಿ. ಬೇಸಿಗೆಯಲ್ಲಿ ನಗರಕ್ಕೆ ಹೋದರೆ ದಸರಾ ರಜೆಗಳಿಗೆ ಬೆಂಗಳೂರು - ಹೀಗೆ ನಮ್ಮ ವ್ಯವಸ್ಥೆ.

ನಾವು ಚಿಕ್ಕ ವಯಸ್ಸಿನವರಾದವರಿಂದ ನಮ್ಮನ್ನು ನಗರಕ್ಕೆ ಕರೆದುಕೊಂಡು ಹೋಗಲು ಯಾರಾದರೂ ಇರಬೇಕಾಗುತ್ತಿತ್ತು. ಈ ಹೊಣೆ ಹೆಚ್ಚಿನ ಪಟ್ಟಿಗೆ ನನ್ನ ತಾತನದು. ನನ್ನ ಅತ್ತೆಯ ಮನೆಯಲ್ಲಿ ಫೋನ್ ಇಲ್ಲದ್ದರಿಂದ ವ್ಯವಸ್ಥೆಗಳೆಲ್ಲ ೧೫ ಪೈಸೆಯ ಪೋಸ್ಟ್ ಕಾರ್ಡ್ ಮೂಲಕ. ಎಂಭತ್ತರ ದಶಕದಲ್ಲಿ ನಮ್ಮೆಲ್ಲರ ಜೀವನ ಬಹಳ ಸರಳ.

ನಗರಕ್ಕೆ ಹೋಗಲು ನಮಗಿದ್ದ ಎರಡು ವಿಧಾನ ರೈಲು ಮತ್ತು ಬಸ್ಸು. ನಮಗೆ ರೈಲೇ ಆಗಬೇಕು. ಆವಾಗ ಮೈಸೂರು-ಚಾಮರಾಜನಗರ ರೈಲು ಉಗಿಬಂಡಿ. ಆದರೆ ನಮ್ಮ ತಾತನಿಗೆ ರೈಲು ಆಗದು. ರೈಲಿನಲ್ಲಿ ಹೋಗಬೇಕೆಂದರೆ ಅದನ್ನು ಕಾಯಬೇಕು. ಬಸ್ಸಾದರೆ ಘಂಟೆಗೆ ಹಲವಾರು ಇದ್ದವು. ಜೊತೆಗೆ ನಗರದಲ್ಲಿ ರೈಲು ನಿಲ್ದಾಣ ಊರಿನಿಂದ ಸ್ವಲ್ಪ ಹೊರಗೆ - ಅಲ್ಲಿಂದ ಮನೆಗೆ ಹೋಗುವುದು ಅನಾನುಕೂಲದ ಮಾತು. ಇದರ ಮೇಲೆ ನನ್ನ ಅತ್ತೆಯ ಬೆದರಿಕೆ - "ನೋಡ್ರೊ, ಶನಿವಾರದ ಡ್ರೈವರ್ ಸರಿ ಇಲ್ಲ್ವಂತೆ. ಒಳ್ಳೆ ಇದ್ದಲನ್ನು ಮಾರ್ಕೊತಾನಂತೆ. ಕಿಟಕಿಗೆ ಮುಖ ಇಟ್ಟ್ಕೊಂಡು ಬಂದ್ರೆ ಆ ಕೆಟ್ಟ ಮಸೀನ ಉಜ್ಜಕ್ಕೆ ನಂಗಾಗಲ್ಲ. ರೈಲು ಕೂಡ ನಿಧಾನವಾಗಿ ಓಡತ್ತೆ."

ಕೆಲವು ಬಾರಿ ನಾವು ಈ ಕಾಳಗವನ್ನು ಗೆಲ್ಲುತ್ತಿದ್ದೆವು. ನಮ್ಮ ಆ ರೈಲು ಪ್ರಯಾಣ ಎಷ್ಟು ಸುಖಕರ! ೬೦ ಕಿಲೋಮೀಟರ್ ಹೋಗಲು ೨ ಘಂಟೆ ಆಗುತ್ತಿತ್ತು. ನಾನು, ನನ್ನ ತಮ್ಮ ಕಿಟಕಿಗೆ ಮುಖ ಹಾಕಿಕೊಂಡು ಬೀಗುತ್ತಿದ್ದರೆ, ನಮ್ಮ ತಾತ, "ಅಯ್ಯೋ ಪಾಪಿಗಳಾ, ಸುಮ್ನೆ ನೆಟ್ಟಗೆ ಕೂತ್ಕೊಳ್ಳ್ರೋ!" ಎಂದು ಹಲ್ಲು ಕಡಿಯುತ್ತಿದ್ದರು. ಆ ಹಸಿರು ಅಥವ ಹಳದಿ ಮರದ ಸೀಟ್, ಕಪ್ಪು ಫ್ಯಾನ್, ಮುಚ್ಚದ ಕಿಟಕಿ, ಮೀಟರ್ ಗೇಜ್ ನ ಮೇಲೆ ಬಹಳ ಅಲುಗಾಡುವ ಬಂಡಿ, ಉಗಿಬಂಡಿಯ ಸುವಾಸನೆ. ರೈಲು ತಿರುಗಿದಾಗ ಮುಂದೆ ಇದ್ದ ಹೊಗೆ ಉಗುಳುವ ಎಂಜಿನ್ನನ್ನು ಕಂಡರೆ ನಮಗೆ ಎಲ್ಲಿಲ್ಲದ ಖುಶಿ!

ನಗರ ತಲುಪಿದಾಗ ನಮ್ಮ ಇನ್ನೊಂದು ಡಿಮಾಂಡ್ ಕುದುರೆ ಗಾಡಿಯಲ್ಲಿ ಮನೆಗೆ ಹೋಗಬೇಕೆಂದು. ಮೈಸೂರಿನಲ್ಲಿ ಜಟಕಾ ಬಂಡಿಗಳು ಹೆಚ್ಚಿನಪಟ್ಟಿಗೆ ಮಾಯವಾಗಿದ್ದರೂ, ಚಾಮರಾಜನಗರದಲ್ಲಿ ಇನ್ನೂ ಹಲವಾರು ಇದ್ದವು. ಬಸ್ಸಿನಲ್ಲಿ ಹೋಗಿ ಇಳಿದಿದ್ದರೆ ನಮ್ಮ ತಾತ, "ಗಾಡಿ, ಆಟೊ ಏನೂ ಬೇಡ ನಡಿರೋ. ಮನೆ ಇಲ್ಲೇ ಹತ್ತ್ರ ನಡ್ಕೊಂಡ್ ಹೋಗೋಣ." ಎನ್ನುತ್ತಿದ್ದರು. ಆದರೆ ರೈಲು ನಿಲ್ದಾಣದಿಂದ ನಡೆಯಲು ಅವರೂ ಹಿಂಜರಿಯುತ್ತಿದ್ದರು. ಜಟಕಾದವನ ಹತ್ತಿರ ೧೫ ನಿಮಿಷ ಚೌಕಾಶಿ ಮಾಡಿದ ಮೇಲೆ ನಮ್ಮ ಸಾಮಾನನ್ನು ಗಾಡಿಯಲ್ಲಿ ಹಾಕಿ, ಒಬ್ಬ ಮುಂದೆ ಕುಳಿತು, ಇನ್ನೊಬ್ಬ ತಾತನ ಜೊತೆ ಹಿಂದೆ ಕುಳಿತು, ಬಡಪಾಯಿ ಒಣಗಿಕೊಂಡ ಕುದುರೆ ಸ್ವಲ್ಪ ತಿಣುಕಿಕೊಂಡೇ ಹೊರಡುತ್ತಿತ್ತು. ಹೋಗುತ್ತ ದಾರಿಯಲ್ಲಿ ಊರಿಗೆ ಇದ್ದ ಒಂದೇ ಪೆಟ್ರೊಲ್ ಬಂಕ್, ಭ್ರಮರಾಂಬ ಟಾಕೀಸ್, ಹೊಸದಾದ ಬಸವೇಶ್ವರ ಟಾಕೀಸ್ (ಊರಿನಲ್ಲಿ ಮೊತ್ತೊಂದು ಸಿನೆಮ ಕೃಶ್ಣ - ಇದ್ದದ್ದು ಮೂರೆ), ಸಿರಿಕಲ್ಚರ್ ಇಲಾಖೆ, ಜೆ ಎಸ್ ಎಸ್ ಶಾಲೆ ಮತ್ತು ಕಾಲೇಜು, ಪಿಡಬ್ಲ್ಯೂಡಿ ಕಾಲೋನಿ, ದೊಡ್ಡ ಬಯಲು, ಮತ್ತೆ ಕೊನೆಗೆ ಮನೆ.

ನಮ್ಮ ಅತ್ತೆಯ ಮನೆ ಒಂದು ಚೊಕ್ಕವಾದ ಬಿಳಿಯ ಮನೆ. ಅದಕ್ಕೆ ಕೆಂಪು ಮಂಗಳೂರು ಹಂಚು. ಮನೆಯೆದುರು ಚಪ್ಪರ. ಮನೆಯ ಸುತ್ತ ಒಪ್ಪವಾದ ಒಂದು ಹೂತೋಟ. ಮನೆ ಸುತ್ತ ತಂತಿಯ ಬೇಲಿ, ಅದರಲ್ಲಿ ಕಳ್ಳಿ ಗಿಡ. ನಾಲ್ಕು ಮೂಲೆಯಲ್ಲೂ ಒಂದೊಂದು ತೆಂಗಿನ ಮರ. ಎದುರು ಎರಡು ಹೊಂಗೆ ಮರ, ಪಕ್ಕದಲ್ಲಿ ಸೀಬೆ ಮರ ಮತ್ತು ಸೀತಾಫಲ ಗಿಡಗಳು. ಮತ್ತೊಂದು ಪಕ್ಕದಲ್ಲಿ ಜಾಜಿ ಮತ್ತು ಮಲ್ಲಿಗೆ. ಮನೆಯ ಬಾಗಿಲಿನವರೆಗೆ ಸೇವಂತಿಗೆ ಹೂ ಪೊದೆಗಳು, ಹೂಕುಂಡಗಳಲ್ಲಿ ಕ್ರೊಟಾನ್ ಗಿಡಗಳು. ಮನೆಯ ಪಕ್ಕದಲ್ಲಿ ಬಾಳೆ ಗಿಡಗಳ ಒಂದು ಗುಂಪು, ಮತ್ತು ಅದರ ಪಕ್ಕದಲ್ಲಿ ನೆಲದ ಸಮದಲ್ಲಿ ಒಂದು ತೊಟ್ಟಿ. ನಗರದ ಒಣ ಬಿಸಿಲಿನಲ್ಲಿ ಆ ತೋಟವನ್ನು ಜೀವಂತವಾಗಿ ಇಟ್ಟಿದ್ದ ನಮ್ಮ ಮಾವನ ಶ್ರಮವನ್ನು ಮೆಚ್ಚಬೇಕಾದ್ದೆ. ಮನೆಯೆದುರಿನ ಚಪ್ಪರದ ಕೆಳಗೆ ಒಂದೆರಡು ಬೆತ್ತದ ಕುರ್ಚಿಗಳು. ನಮ್ಮ ಭಾವಾಜಿ (ನಮ್ಮ ಮಾವನನ್ನು ನಮ್ಮ ತಂದೆ-ಚಿಕ್ಕಪ್ಪಂದಿರು ಹಾಗೆ ಕರೆಯಲು ಶುರು ಮಾಡಿದಾಗಿಂದ ಅವರು ಎಲ್ಲರಿಗೂ ’ಭಾವಾಜಿ’) ಬಿಳಿ ಪಂಚೆ, ಬಿಳಿ ಬನಿಯನ್ ಅಲ್ಲಿ ನಮ್ಮನ್ನು ಸ್ವಾಗತಿಸಿ, ನಮ್ಮ ಚೀಲಗಳನ್ನು ತೆಗೆದುಕೊಂಡು ಒಳಗೆ ಹೋಗುತ್ತ, "ಇಂದಿರಾ, ಬಂದ್ರು ನೋಡು" ಎಂದು ಕೂಗು ಹಾಕುತ್ತಿದ್ದರು. ನಮ್ಮ ಇನ್ನಕ್ಕ (ನನ್ನ ಬಾಯಲ್ಲಿ "ಇಂದಿರಕ್ಕ" ಹೊರಡದೆ ಇದ್ದರಿಂದ ಅದು "ಇನ್ನಕ್ಕ" ಆಗಿತ್ತು) ಹೊರಗೆ ಬಂದು, "ನಮ್ಮಪ್ಪನ್ನ ತುಂಬ ಗೋಳು ಹೋಯ್ಕೊಳ್ಳ್ಲಿಲ್ಲ ತಾನೆ? ಸರಿ ಬನ್ನಿ, ಆ ಮಸೀನ ಮುಖದಿಂದ ತಿಕ್ಕಣ" ಎಂದು ಹೇಳಿ ಬಚ್ಚಲಿಗೆ ಕರೆದುಕೊಂಡು ಕೈ, ಕಾಲು ಮುಖ ತೊಳಸಿ ಬಟ್ಟೆ ಬದಲಾಯಿಸಲು ಹೇಳುತ್ತಿದ್ದರು. ಒಳಗೆ ನಮ್ಮ ಮಾವನ ತಾಯಿ ದ್ರೌಪದಜ್ಜಿ ನಮ್ಮನ್ನು ನೋಡಿ, "ಅಯ್ಯೊ ಮುಂಡೇವಾ, ಎಷ್ಟು ಬೆಳೆದುಬಿಟ್ಟಿದೀರ್‍ಓ!" ಎಂದು ಸ್ವಾಗತಿಸುತ್ತಿದ್ದರು.

ನಮ್ಮ ತಾತ ಸಮಯವಿದ್ದರೆ ಅಂದೇ ಮೈಸೂರಿಗೆ ಮರಳುತ್ತಿದ್ದರು - ಬಸ್ಸಿನಲ್ಲಿ. ಅಷ್ಟು ಹೊತ್ತಿಗೆ ನಮ್ಮ ಅತ್ತೆ-ಮಾವನ ಮಗಳು ಸುಮ (ನಮಗೆ ಸುಮಕ್ಕ) ಮನೆಗೆ ಬಂದರೆ, ನಮ್ಮ ಗಲಾಟೆ ಶುರು. ಸುಮಕ್ಕ ನನಗಿಂತ ಹತ್ತು ವರುಷ ದೊಡ್ಡವಳು, ಆದರೆ ನಮ್ಮಿಬ್ಬರ ಮಧ್ಯ ನಮ್ಮ ಕುಟುಂಬದಲ್ಲಿ ಬೇರೆ ಮಕ್ಕಳಿರಲಿಲ್ಲ. ಜೊತೆಗೆ ನನಗೆ ತಮ್ಮನಿದ್ದನೇ ಹೊರತು ಅವನು ಇನ್ನೂ ಬಹಳ ಚಿಕ್ಕವನು (ಎಂದು ನನ್ನ ಅನಿಸಿಕೆ). ಸುಮಕ್ಕ ಮತ್ತು ನಾನು ಕುಳಿತುಕೊಂಡು ನಮ್ಮ ರಜೆಯಲ್ಲಿ ಏನೇನು ಮಾಡಬೇಕೆಂದು ಪ್ಲ್ಯಾನ್ ಮಾಡುತ್ತಿದ್ದೆವು. ಮೈಸೂರಿನಲ್ಲಿ ನಮಗೆ ಪಿಚ್ಚರ್ ನೋಡಲು ಅನುಮತಿ ಇರುತ್ತಿರಲಿಲ್ಲ. ಸುಮಕ್ಕ ನಮ್ಮನ್ನು ನಗರದಲ್ಲಿ "ಲಯನ್ ಜಗಪತಿ ರಾವ್" ಅಂಥ ಕ್ಲಾಸಿಕ್ಸ್ ಅನ್ನು ನೋಡಲು ಕರೆದುಕೊಂಡು ಹೋಗುತ್ತಿದ್ದಳು.

ನಮ್ಮ ಮಾವ ಜೆ ಎಸ್ ಎಸ್ ಶಾಲೆಯಲ್ಲಿ ಇದ್ದರು, ಜೊತೆಗೆ ಅವರಿದ್ದ ಬಡಾವಣೆ ಜೆ ಎಸ್ ಎಸ್ ಅವರದ್ದೆ. ಹಾಗಾಗಿ ಅಲ್ಲಿದ್ದವರೆಲ್ಲ ಜೆ ಎಸ್ ಎಸ್ ಶಾಲೆಗಳಲ್ಲಿ ಟೀಚರುಗಳು. ಪ್ರತಿ ವರುಷ ಅಲ್ಲಿಗೆ ಹೋಗುತ್ತಿದ್ದೆನಾದ್ದರಿಂದ ಅಕ್ಕ ಪಕ್ಕದ ಹುಡುಗರೆಲ್ಲ ನನಗೆ ಪರಿಚಯ. ಎದರು ಮನೆಯಲ್ಲಿ ಕಾಂತ ಮತ್ತು ಬಾಬು ಎಂಬ ಅಣ್ಣ ತಮ್ಮಂದಿರು. ಕಾಂತ ಚಿಕ್ಕವನು - ಸುಮಾರು ನನ್ನ ವಯಸ್ಸಿನವನು. ನಾವಿಬ್ಬರೂ ಇಡೀ ರಜೆ ತಂಟೆಗಳನ್ನು ಒಟ್ಟಿಗೆ ಮಾಡುತ್ತಿದ್ದೆವು. ಕೆಲವು ಮನೆಗಳ ಆಚೆ ಜೀವನ್ ಮತ್ತು ಅವನ ತಮ್ಮ ಚಂದನ್.

ನಗರಕ್ಕೆ ಹೋಲಿಸಿದರೆ ಮೈಸೂರು ದೊಡ್ಡ ಊರು. ಎಲ್ಲಾ ರೀತಿಯ ಸೌಲಭ್ಯಗಳೂ ಇರುವ ಜಾಗ. ಆದರೆ ಹಿತ್ತಲ ಗಿಡ ಮದ್ದಲ್ಲ ಅಂದ ಹಾಗೆ, ನಮಗೆ ನಗರ ಮೈಸೂರಿಗಿಂತ ಶ್ರೇಷ್ಠ ಜಾಗ. ಅಲ್ಲಿನ ಜನರ ಸರಳತೆ, ಒಗ್ಗಟ್ಟು, ಹೃದಯವಂತಿಕೆ ಚಿಕ್ಕವರಾದ ನಮಗೆ ಸೂಕ್ಷ್ಮವಾಗಿ ತಿಳಿಯುತ್ತಿತ್ತೋ ಏನೊ!

ದಿನ ಬೆಳಗಾದರೆ ನಾನು ಎದ್ದು ಮೊದಲು ರೇಡಿಯೊ ಹಾಕುತ್ತಿದ್ದೆ. ಯಾವುದೋ ಕಾರಣಕ್ಕೆ ಅಲ್ಲಿ ಬೆಂಗಳೂರು ಆಕಾಶವಾಣಿ ಮೈಸೂರಿನ ಆಕಾಶವಾಣಿಗಿಂತ ಸಲೀಸಾಗಿ ಬರುತ್ತಿತ್ತು. ಅಂಥದ್ದೆ ಒಂದು ಬೆಳಿಗ್ಗೆ ನಾನು ರೇಡಿಯೊ ಹಾಕಿದಾಗ ರಾಜೀವ್ ಗಾಂಧಿಯ ಹತ್ಯೆಯ ಬಗ್ಗೆ ಮೊದಲು ಕೇಳಿದೆ. ತಕ್ಷಣ ಎಲ್ಲರನ್ನೂ ಎಬ್ಬಿಸಿ ಸುದ್ದಿ ಹೇಳಿ, ಬೇಗ ಮುಖ ತೊಳೆದುಕೊಂಡು ಕಾಂತ, ಬಾಬು, ಜೀವನ್ ಅವರುಗಳಿಗೆ ಸುದ್ದಿ ಹೇಳಲು ಓಡಿದೆ. ರಾಜೀವ್ ಗಾಂಧಿ ಎಂಥ ಮನುಷ್ಯನೋ ಏನೊ, ಆದರೆ ಸಣ್ಣ ಊರಿನ ಜನಕ್ಕೆ ಆ ಸುದ್ದಿ ಸರಿ ಸಮಾನವಾಗಿ ದಿಗಿಲು, ಆತಂಕ, ಸಂಭ್ರಮಗಳನ್ನು ತಂದ ಹಾಗೆ ಇತ್ತು.

ಇನ್ನಕ್ಕನ ಅಡುಗೆ ನಮ್ಮ ಮನೆಯಲ್ಲಿ ಎಲ್ಲರಿಗೂ ಪ್ರಿಯವಾದದ್ದು. ಅವಳ ಮಸಾಲೆ ದೋಸೆ, ಪೂರಿ ಸಾಗು ಅದ್ಭುತ. ಅದರೆ ಅವಳ ಅಕ್ಕಿ ರೊಟ್ಟಿಯ ಸಮಾನ ನಾನು ಇನ್ನೆಲ್ಲೂ ತಿಂದಿಲ್ಲ. ನಾವು ಇದ್ದಾಗ ಪ್ರತಿ ದಿನದ ತಿಂಡಿ ಊಟಗಳ ಬಯಕೆಗಳನ್ನು ಚಾಚೂ ತಪ್ಪದೆ ಮಾಡುತ್ತಿದ್ದಳು. ಅದಕ್ಕೆ ಬೇಕಾದ್ದ ಸಾಮಗ್ರಿಗಳನ್ನು ಅಲ್ಲೆ ಹತ್ತಿರವಿದ್ದ "ಚಡ್ಡಿ" ಅಂಗಡಿಗೆ ನಮ್ಮನ್ನು ಓಡಿಸುತ್ತಿದ್ದಳು. ಅಂಗಡಿಯ ಮಾಲೀಕ ಯಾವಾಗಲೂ ಚಡ್ಡಿ ಧಾರಿ. ಹಾಗಾಗಿ ಹೆಸರು.

ನಂತರ ನಾನು ನನ್ನ ತಮ್ಮ ದ್ರೌಪದಜ್ಜಿಯ ಪ್ರಕಾರ ಪೋಲಿ ಅಲೆಯಲು ಹೋಗುತ್ತಿದ್ದೆವು. ನಮಗೆ ಆಟವಾಡಲು ಇದ್ದದ್ದು ಧೂಳು ತುಂಬಿದ ರಸ್ತೆ, ಒಂದಷ್ಟು ಹುಡುಗರು, ಒಂದು ಚಂಡು ಅಥವ ಟೈರ್. ಅದೇನೂ ಇಲ್ಲದಿದ್ದರೆ ಹತ್ತಲು ಹಲವಾರು ಮರಗಳು. ಮನೆಯಂಗಳದಲ್ಲೇ ಇದ್ದ ಸೀಬೆ ಮರ ಹತ್ತಿ ಅದನ್ನು ಅಲುಗಾಡಿಸಿ ಹಡಗಿನ ಮೇಲೆ ಹೋದಂತೆ ನಟಿಸುತ್ತಿದ್ದೆವು. ಮಧ್ಯದಲ್ಲಿ ಓಡಿ ಬಂದು ಊಟ ಮಾಡಿ ಮತ್ತೆ ಹೊರಗೆ ಓಡುತ್ತಿದ್ದೆವು. ಕೆಲವು ಬಾರಿ ಸುಮಕ್ಕ ಅವಳ ಗೆಳತಿಯರ ಜೊತೆ ಎಲ್ಲಾದರೂ ಹೋದರೆ, ನಾವೂ ಬಾಲಗಳಂತೆ ಹೊರಡುತ್ತಿದ್ದೆವು. ದೇವಸ್ಥಾನದ ಹತ್ತಿರದ ಪೇಟೆಯೇ ಸ್ವರ್ಗ! ಪಚ್ಚಪ್ಪನ ಹೋಟೆಲ್ ನ ದೋಸೆಯೇ ಅಮೃತ!

ಸಂಜೆಯಾಗುತ್ತ ವಾಪಾಸ್ ಮನೆಗೆ ಬಂದು ಕೈ ಕಾಲು ಮುಖ ತೊಳೆದುಕೊಂಡು, ಹಾಲು ಕುಡಿದು ಹೊರಗೆ ಜಗುಲಿಯ ಮೇಲೆ ಕುಳಿತರೆ ಕಾಗೆ ಗಾತ್ರದ ಸೊಳ್ಳೆಗಳ ನಾದಸ್ವರಕ್ಕೆ ಬಡಾವಣೆಯ ಹಿರಿಯರ ಪರ್ಯಾಯ ನಡೆಯುತ್ತಿತ್ತು. ಹರಟೆ-ಪುರಾಣ ತರುವವರಿಗೆಲ್ಲರಿಗೂ ಒಳಗಿನಿಂದ ಕಾಫಿಯ ಸರಬರಾಜು ನಮ್ಮ ಕೆಲಸ. ಅದು ಮುಗಿದ ನಂತರ ಎಲ್ಲರೂ ಮನೆಯೊಳಗೆ ಕೆಂಪು ನೆಲದ ಮೇಲೆ ಕುಳಿತು ಊಟ ಮಾಡಿ, ಸುಮಾರು ಒಂಭತ್ತರ ಹೊತ್ತಿಗೆ ದೊಡ್ಡ ರವಿ ವರ್ಮನ ರಾಮ-ಸೀತೆಯರ ಚಿತ್ರಪಟದ ಕೆಳಗಿದ್ದ ಆಪ್ಟಾನಿಕ ಕಪ್ಪು-ಬಿಳುಪು ಟೀವಿಯಲ್ಲಿ ಅಂದಿನ ರಾಷ್ಟ್ರೀಯ ವಾರ್ತೆಗಳನ್ನು ನೋಡುವ ಉತ್ಸಾಹ. ಆವಾಗ ಇದ್ದದ್ದು ದೂರದರ್ಶನ ಒಂದೇ. ಅದರಲ್ಲೇ ಎಷ್ಟು ಸಂತೋಷ!

ನಮ್ಮ ಬೇಸಿಗೆಗಳು ಹೀಗೆಯೇ ಬಹಳ ಬೇಗ ಓಡುತ್ತಿದ್ದವು. ಮೈಸೂರಿಗೆ ಮರಳಿ ಹೋಗುವ ಸಮಯ ಹತ್ತಿರ ಬರುವಾಗ ನಾವಿಬ್ಬರೂ ನಗರದ ಅಷ್ಟೂ ಬಿಸಿಲನ್ನು ಮುಖದ ಮೇಲೆ ಹೊತ್ತು ತೆಗೆದುಕೊಂಡು ಹೋಗುತ್ತಿದ್ದೆವೇನೋ.

ಶಾಲಯಲ್ಲಿ ಮೇಲಿನ ತರಗತಿಗಳಿಗೆ ಹೋಗುತ್ತಿದ್ದಂತೆಯೆ ನಮ್ಮ ನಗರದ ಪಯಣಗಳು ಕಡಿಮೆಯಾದವು. ಆಮೇಲೆ ಇನ್ನಕ್ಕ-ಭಾವಾಜಿ ಮೈಸೂರಿಗೇ ಬಂದುಬಿಟ್ಟರು. ಹಲವಾರು ವರುಷಗಳ ನಂತರ ನಾವೆಲ್ಲರೂ ಒಟ್ಟಿಗೆ ನಗರಕ್ಕೆ ಹೋಗಿ ಹಳೆಯ ಗೆಳೆಯರನ್ನು, ಪರಿಚಯದ ಬೀದಿಗಳನ್ನು ನೋಡಿಕೊಂಡು ಬಂದೆವು. ಇದೇನಾ ನಮ್ಮ ನಗರ?

"ನಗರ ತುಂಬ ಬದಲಾಗಿದೆ ಅಲ್ವೇನೊ" ಎಂದು ಭಾವಾಜಿ ಕೇಳಿದರು. ಸುಮ್ಮನಿದ್ದೆ. ಬದಲಾದದ್ದು ನಾವಲ್ಲವೇ?

Labels:

0 Comments:

Post a Comment

<< Home